Thursday, March 25, 2010

ಪ್ರೀತಿಯ ಪ್ರಸಾದ

ಪ್ರೀತಿಗೆಂದೆಂದು ಇಲ್ಲ ತಿರಸ್ಕಾರ
ತಿಳಿದರೆ ತಾನಾಗಿಯೇ ತಿಳಿಯುವುದು
ಕೆಲವೊಮ್ಮೆ ಪ್ರೀತಿಸುವ ಮನವನು ಅರಿಯದು ..
ಅರಿಯದೆ ಯಾರನು ಪ್ರೀತಿಸದು ....
ಸಾಧ್ಯವಾದರೆ ಸಂಗಾತಿಯಾಗುವುದು
ಸಲ್ಲದಿರೆ ಮರೀಚಿಕೆಯಾಗುವುದು
ಸಾಯುವವರೆಗೂ ಭಾವನೆಗಳ ಸಾಯಿಸಿ
ಎದೆಯ ಗೂಡಿನ ಒಳಗೆ ಸಮಾಧಿಯ ಕಟ್ಟಿ
ಹೂತಿಡುವುದಕ್ಕಲ್ಲ ಪ್ರೀತಿ
ಭಾವಗಳ ಬಯಲುಗೊಳಿಸಿ ..
ತಿಳಿಯಾಗುವುದು ಮನದಾಳದ ಭೀತಿ ...

ಜೋಪಾನವಾಗಿ ತೆರೆದಿಟ್ಟ ಪ್ರೀತಿ
ಪ್ರೇಮಿಯ ನಾಟದೇ ಹೋದಲ್ಲಿ
ಮನೆಯ ಮುಂದಿನ ತುಳಸಿ ಕಟ್ಟೆಯಂತೆ
ಪ್ರೀತಿಯ ನೆಟ್ಟು ಪೂಜಿಸುವ ...
ಕೊನೆಪಕ್ಷ ವೈರಾಗ್ಯವೆಂಬ ಪ್ರಸಾದವಾದರು ಸಿಕ್ಕೀತು ....!

Tuesday, March 23, 2010

ಕಾಯುತಿರುವೆ ಕನಸುಗಳ ಕಟ್ಟಿ
ನೀ ಮಾತನಾಡುವೆಯೆಂದು....
ಬೇಯುತಿರುವೆ ವಿರಹವ ಬಿಟ್ಟು
ನೀ ಬಂದು ಸೇರುವೆಯೆಂದು...
ನೀನಾಗಿಯೇ ಬರುವ ತನಕ
ನಾ ಕಾಡಿಸುವುದಿಲ್ಲ ನಿನಗೆಂದೆಂದೂ....
ಈ ನನ್ನ ಚೀತ್ಕಾರಕ್ಕೆ
ಆ ನಿನ್ನ ಸತ್ಕಾರ ಸಿಗುವುದು ಎಂದು..?

ಮನಸ ಕೊಡುವ ಮುನ್ನ

ರೇಶಿಮೆ ಹುಳದ ಸುತ್ತ ಸುತ್ತಿರುವುದು ಕನಸಲ್ಲ
ಗೆಳತಿ ಕಲ್ಪನೆಯ ಕಾವ್ಯದೊಳು ಕಾಣದಿರುವ ತಮಸ್ಸು...
ಸ್ನೇಹದ ನೊಗವ ಹೊರಲು ಸಾಲದು ಹೆಗಲು
ಹಗಲು ಹೊತ್ತಲ್ಲೇ ಕಾಣದಂತಾಯ್ತಲ್ಲ ಮುಗಿಲು...
ಏನೋ ಕನವರಿಸುತ್ತ ಕಳೆದು ಹೋಯ್ತು ಕಾಲ
ಕ್ಷಣ ಹೊತ್ತು ಮೈಮರೆತಾಗ ಕ್ಷಣಿಕವಾಯ್ತೆ ಪ್ರೇಮಜಾಲ?
ಕಂಪನು ಇತ್ತ ಪ್ರೀತಿಗೆ
ಪ್ರೇಮಿಗಳ ಕಂಪಿಸುವುದೂ ತಿಳಿದಿದೆ ಕಾಡಿಸುವುದೂ ತಿಳಿದಿದೆ ....!
ಮನಸ ಕೊಡುವ ಮುನ್ನ
ಮಾತು ತಿಳಿದಿರೆ ಚೆನ್ನ !!!.....!!

Thursday, March 18, 2010

ನಾ !

ಬದುಕೆಂಬ ತೀರದಲ್ಲಿ
ಬಯಕೆ ಎಂಬ ಬಿಸಿ ಅಲೆಗೆ ಬೆರಗಾಗಿ
ಕಾಣದ ಸುಳಿಯ ಕಾತರಿಸುತಿಹೆನು ....
ಅವಳ ಮಂಪರು ಮಾತಿನ
ತುಂತುರು ಮಿಡಿತವ
ತಂತಾನೆ ಮನದಲಿ ಪಿಸುಗುಡುತಿಹೆನು...
ಆ ನೋವಿಲ್ಲದ ನಲುಮೆಗೆ
ಪೀಡಿಸದ ಪ್ರೀತಿಗೆ
ಹೃದಯದಲ್ಲೇ ಪರದಾಡುತಿಹೆನು ,...!