Wednesday, July 21, 2010

"ಅನಾಥೋ ದೈವ ರಕ್ಷಕ"

ಅದೇಕೋ ಇಂದು ನಾ ಎದುರಲ್ಲೇ ಕುಳಿತಿದ್ದರೂ ನನ್ನ ಕಡೆ ಕಣ್ಣೆತ್ತಿಯೂ ನೋಡಲಿಲ್ಲ.ವಿಶ್ವಾಸ್ ,ದಿನಾ ನಾ ನಿನ್ನ ಜೊತೆಯಲ್ಲೇ ಇರೋದು.ನಿನ್ನ ಜೊತೆಯೇ ನಾನೂ ತಿರುಗುತ್ತಿರುವೆನು. ನನಗೆ ನನ್ನದೇ ಆದ ಎಷ್ಟೇ ಜವಾಬ್ದಾರಿಗಳಿದ್ದರೂ ನಿನ್ನನ್ನು ನೋಡಿಕೊಳ್ಳುವುದು ನನ್ನಿಂದಾಗದ ಕೆಲಸವೇನಲ್ಲ .ಇತ್ತೀಚಿಗೆ ನಿನ್ನ ವರ್ತನೆಗಳೆಲ್ಲವೂ ಬದಲಾಗಿವೆ. ನೀನು ನನ್ನಲ್ಲಿ ಹೇಳಿಕೊಂಡ ನಿನ್ನ ನೆಚ್ಚಿನ ಇಂಜಿನಿಯರಿಂಗ್ ಪದವಿ ಪಡೆದು ಮೂರ್ನಾಲ್ಕು ತಿಂಗಳಾಯ್ತು..
ನಿಮ್ಮಪ್ಪ ಕೊಡಿಸಿರುವ ಸೆಕೆಂಡ್ ಹ್ಯಾಂಡ್ ಕಾರಿನಲ್ಲಿ ನನಗೂ ಒಂದು ಆಸನ ಮೀಸಲು .ಕಾಲೇಜಿಗೆ ಹೋಗುವ ಮೊದಲ ದಿನದಿಂದಲೂ ನಿನ್ನನ್ನು ಗಮನಿಸಿರುವೆ.ಆದರೆ ಇತ್ತೀಚಿನಿಂದ ನೀನು ನನ್ನನ್ನು ಮರೆತಿರುವಂತಿದೆ .ನನ್ನಲ್ಲಿ ಎಲ್ಲಾ ವಿಷಯಗಳನ್ನೂ ಮುಚ್ಚುಮರೆ ಇಲ್ಲದಂತೆ ಹೇಳುತ್ತಿದ್ದವನು ಈಗೇಕೆ ಏನನ್ನೂ ಹೇಳುತ್ತಿಲ್ಲ?ಹಾಗಂತ ನಾ ನಿನ್ನಲ್ಲಿ ಬಾಯಿಬಿಟ್ಟು ಕೇಳುವ ಗೋಜಿಗೂ ಹೋಗುವುದಿಲ್ಲ.
ನನಗೂ ತಿಳಿದಿದೆ ನಿನಗಿನ್ನೂ ಕೆಲಸ ದೊರೆತಿಲ್ಲ .ಇದಕ್ಕೆ ಕಾರಣ ಹಲವಾರಿವೆ..ಆದರೂ ನಿನ್ನಲ್ಲಿ ತಾಳ್ಮೆ ಕಳೆಯುತ್ತಿದೆ.ನಿನ್ನ ವಿಫಲ ಯತ್ನಕ್ಕೆ ಇತರರನ್ನು ದೂಶಿಸುತ್ತಿರುವೆ .ನಿರ್ದೋಶಿಯಾದ ನನ್ನನ್ನು ಪ್ರಮುಖ ಕಾರಣವನ್ನಾಗಿಸಿರುವೆ .ನಾನು ಮಾಡಿರುವುದಾದರೂ ಏನು ? ನಾಲ್ಕು ವರ್ಷಗಳಲ್ಲಿ ನೀನು ಸಾಧಿಸಿರುವುದೇನೂ ನನ್ನ ಗಮನಕ್ಕೆ ಬಂದಿಲ್ಲ.ಅಮೂಲ್ಯ ಸಮಯವನ್ನೆಲ್ಲ ಕಳೆದು ಬಿಟ್ಟೆ.ಅದು ಮತ್ತೆ ಬರುವುದೇ? ಈಗಲಾದರೂ ನಿನ್ನ ಸಾಮರ್ಥ್ಯವನ್ನು ತಿಳಿದು ಪ್ರಯತ್ನಪಟ್ಟರೆ ಅಸಾಧ್ಯವೇನಲ್ಲ.ಸಿಕ್ಕಸಿಕ್ಕವರ ಮಾತನ್ನು ಕೇಳಿ ತಲೆ ಕೆಡಿಸಿಕೊಳ್ಳಬೇಡ. ನಾ ಹೇಗೆ ಹೇಳಲಿ ನಿನಗೆ? ಒಳ್ಳೆಯದು ಕೆಟ್ಟದ್ದನ್ನು ಆರಿಸಿಕೊಳ್ಳುವುದು ನಿನ್ನ ಬಳಿಯೇ ಇದೆ .ಹೀಗೆ ನನ್ನಷ್ಟಕ್ಕೆ ನಾನೇ ಎಂದುಕೊಳ್ಳುತ್ತಿದ್ದೆ.
ಅಷ್ಟರಲ್ಲಿ ವಿಶ್ವಾಸ್ ಕಾರನ್ನು ಬುರ್ರನೆ ಓಡಿಸುತ್ತಾ ದಾರಿಯುದ್ದಕ್ಕೂ ಬೆವರುತ್ತ ಮೊಬೈಲಿನಲ್ಲಿ ಏನೋ ಸಂಭಾಷಣೆ ನಡೆಸುತ್ತ ಹೋಗುತ್ತಿದ್ದ. ನನ್ನ ಬಳಿ ಏನೂ ಹೇಳಲಿಲ್ಲ.ನನಗೂ ಏನೋ ಸಂಶಯ ಬರುತ್ತಿದೆ.ಯಾಕೆಂದರೆ ಯಾರೂ ಕೆಟ್ಟ ಕೆಲಸವನ್ನು ಮಾಡುವಾಗ ನನ್ನ ಬಳಿ ಹೇಳುವುದಿಲ್ಲ..ಯಾಕೆಂದರೆ ನಾನು ಒಳ್ಳೆಯದನ್ನೇ ಅಪೇಕ್ಷಿಸುತ್ತೇನೆ.

ಯಾರದೋ ಫೋನ್ ಬಂತು."ಈಗ ಹೊರಡ್ತಾ ಇದ್ದೀನಿ ನಾ ಒಬ್ಬನೇ ಬರ್ತಾ ಇದ್ದೀನಿ ಅಲ್ಲಿ ಏನೂ ಪ್ರಾಬ್ಲಮ್ ಇಲ್ಲ ತಾನೇ?" ಎಂದ ವಿಶ್ವಾಸ್.ಅತ್ತ ಕಡೆಯಿಂದ "ಏನೂ ಆಗಲ್ಲ ನಾವು ಒಳ್ಳೆ ಕೆಲಸಾನೆ ಮಾಡ್ತಾ ಇದ್ದೀವಿ ಬೇಗ ಬಾ "ಎಂದು ಕೇಳಿ ಬಂತು.ಅರೆ ನಿನ್ನ ಜೊತೆ ನಾ ಇರೋದನ್ನ ಮರೆತೇ ಬಿಟ್ಟೆಯ? ನನ್ನನ್ನು ಬಿಟ್ಟು ಹೋಗಲು ಹೇಗೆ ಸಾಧ್ಯ?ಎಂದು ನಾ ಆಲೋಚಿಸುತ್ತ ಕುಳಿತಿದ್ದೆ ಅಷ್ಟರಲ್ಲಿ ನನ್ನ ಕಡೆಗೆ ತಿರುಗಿ "ನಾನು ತಪ್ಪು ಮಾಡಿದರೆ ದಯವಿಟ್ಟು ನನ್ನ ಕ್ಷಮಿಸು. ನೀ ನನ್ನ ಜೊತೆಯಿರು ನನಗೆ ತುಂಬಾ ಭಯವಾಗ್ತಿದೆ", ಎಂದ. ನಾ ಏನೂ ಹೇಳಲಾರದೆ ಸುಮ್ಮನೆ ಕುಳಿತಿದ್ದೆ..ನನಗೆ ಗೊತ್ತು ಯಾವಾಗ ಏನು ಮಾಡಬೇಕೆಂದು..!
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸುಮಾರು ಏಳೆಂಟು ತಾಸುಗಳ ದಾರಿ. ಹೋಗುವಾಗ ಹತ್ತಾರು ಬಾರಿ ಫೋನ್ ಕರೆಗಳು.
ಅತ್ತ ಮಾತಾಡುತ್ತ ಅಜಾಗರೂಕತೆಯಿಂದ ಕಾರ್ ನಡೆಸುವಾಗ ರಸ್ತೆಯ ಬದಿಯಲ್ಲಿ ನಡೆದು ಬರುತ್ತಿದ್ದ ಮುದುಕಿಗೆ ಗುದ್ದಿಬಿಟ್ಟಿತು.
ಪಾಪ, ಆ ಮುದುಕಿ ರಸ್ತೆಯಿಂದಾಚೆ ಮೋರಿಗೆ ಅಪ್ಪಳಿಸಿ ಬಿದ್ದುಬಿಟ್ಟಳು. ಎಲ್ಲಿ ಜನರೆಲ್ಲಾ ಸೇರಿ ತನ್ನನ್ನು ಹಿಡಿಯುವರೋ ಎಂದು ಹೆದರಿ ಕಾರನ್ನು ನಿಲ್ಲಿಸದೆಯೇ ಸತ್ತಳೋ ಬದುಕಿದಳೋ ಎಂಬುದನ್ನೂ ನೋಡದೆ ಮಾನವೀಯತೆಯನ್ನೇ ಮರೆತವನಂತೆ ಅಲ್ಲಿಂದ ವೇಗವಾಗಿ ಬಂದುಬಿಟ್ಟ.ಅವನ ಕೈಕಾಲುಗಳು ಕಂಪಿಸುತ್ತಿದ್ದವು.ಮಧ್ಯಾಹ್ನವೆನ್ನುವಷ್ಟರಲ್ಲಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಸ್ನೇಹಿತ ವಿದ್ಯಾಧರನೆಂಬ ತೆಳು ಗಡ್ಡದ ಯುವಕನೊಬ್ಬ ಕಾರ್ ಏರಿದ.ಅಲ್ಲೇ ಪಕ್ಕದ ಇಪ್ಪತ್ತು ಕಿ.ಮೀ ದೂರವಿರುವ ಸಂಪಿಗೆಹಳ್ಳಿ ಎಂಬಲ್ಲಿ ಇವರ ಡೀಲ್ ಇತ್ತು. ಆ ಊರಿನ ಕಾಳೇಗೌಡ ಎಂಬುವರು ಸುಕನ್ಯ ಎಂಬ 15 ವರ್ಷದ ಬಾಲಕಿ ಹಾಗು ಅವಳ ತಮ್ಮ 10 ವರ್ಷದ ಸಂಚಿತ್ ಎಂಬ ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದರು.ಆಶ್ರಯ ನೀಡಿರುವ ಹೆಸರಿನಲ್ಲಿ ಆ ಇಬ್ಬರು ಕರುಣೆ ಇಲ್ಲದವನಂತೆ ಮನಬಂದಂತೆ ದುಡಿಸುತ್ತಿದ್ದ ಕಾಳೇಗೌಡ. ಆ ಮಕ್ಕಳಿಗೆ ಮುಕ್ತಿ ದೊರಕಿಸುತ್ತೇವೆ ಎಂದು ಅಲ್ಲಿಂದ ಆಸೆ ತೋರಿಸಿ ಕರೆದೊಯ್ದು ಬಾಲಕನನ್ನು ನಡುದಾರಿಯಲ್ಲಿ ಬಿಟ್ಟು ಬೆಂಗಳೂರಿನಲ್ಲಿ ಯಾರಿಗೋ ಐದು ಲಕ್ಷಕ್ಕೆ ಮಾರುವುದು ವುದ್ದೆಶವಾಗಿತ್ತು. ಆದರೆ ವಿಶ್ವಾಸ್ನ ಬಳಿ ಆ ಬಾಲಕರನ್ನು ತಾನು ಅನಾಥಾಶ್ರಮಕ್ಕೆ ಸೇರಿಸುವೆನೆಂದೂ ತನಗೆ ಸಹಾಯ ಮಾಡಿದರೆ ಐವತ್ತು ಸಾವಿರ ಕೊಡುವೆನು ಎಂದು ಹೇಳಿ ನಮ್ಬಿಸಿದ್ದನು.
ಹಳ್ಳಿಯಲ್ಲಿ ಆ ಇಬ್ಬರು ಮಕ್ಕಳನ್ನು ಒಪ್ಪಿಸಿ ಎಲ್ಲರ ಕಣ್ತಪ್ಪಿಸಿ ಕಾರಿನಲ್ಲಿ ಕೂರಿಸಿ ಹೊರಡಲು ಹೇಳಿದ ವಿದ್ಯಾಧರ.ಇದೆಲ್ಲಾ ನೋಡುತ್ತಾ ಸುಮ್ಮನೆ ಕುಳಿತಿದ್ದ ನನ್ನ ಕಡೆ ತಿರುಗಿ ಭಯದ ನಗೆ ಬೀರುತ್ತ ಸಲಾಂ ಹೊಡೆದು ಸುಮ್ಮನಾದ ವಿದ್ಯಾಧರ. ನಾನು ಇವನ ವುದ್ದೆಶವನ್ನೆಲ್ಲ ಮೊದಲೇ ಲೆಕ್ಕ ಹಾಕಿದ್ದೆ .ಇಂಥವರ ವಿಷಯ ನನಗೆ ತಿಳಿಯದೆ ಇನ್ನಾರಿಗೆ ತಿಳಿಯುತ್ತದೆ?ಮುಂದೆ ಇವನಿಗೆ ಗ್ರಹಚಾರ ಕಾದಿದೆ ಇವನ ವಾಯಿದೆ ಮುಗಿಯುತ್ತ ಬಂದಿದೆ ಎಂದು ನಾ ಸುಮ್ಮನಾದೆ.
ಹೇಗಾದರೂ ಮಾಡಿ ವಿದ್ಯಾಧರನಿಂದ ಈ ಇಬ್ಬರು ಮಕ್ಕಳನ್ನು ರಕ್ಷಿಸುವುದು ನನ್ನ ಹೊಣೆಯಾಗಿತ್ತು.ರಾತ್ರಿ ಹಿಂದಿರುಗುವಾಗ ಅದೇ ದಾರಿಯಲ್ಲಿ ಆ ಸಮಯದಲ್ಲಿ ಮುದುಕಿಯ ಶವಯಾತ್ರೆ ನಡೆದುಬರುತ್ತಿತ್ತು. ಇದನ್ನು ಕಂಡ ವಿಶ್ವಾಸ್ಗೆ ಅದೇ ಮುದುಕಿ ಎಂದು ಖಚಿತವಾಗಿ ತೀವ್ರ ರೋಧನೆಯಾಯಿತು.ಅವನಿಗೆ ಜೀವಸಂಕಟ ಶುರುವಾಯಿತು.ಅವಳನ್ನು ಆಗಲೇ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು ಎಂದು ಮರುಗಿದ.ಹೀಗೆ ಕಂಪಿಸುತ್ತ ಕಾರ್ ನಡೆಸುವುದು ಬೇಡವೆಂದು ನನಗನ್ನಿಸಿತು.ವಿದ್ಯಾಧರ್ ತಾನು ಡ್ರೈವಿಂಗ್ ಮಾಡುವೆನೆಂದು ಕುಳಿತ..ವಿಶ್ವಾಸ್ ಹಿಂದೆ ಬಂದು ಕುಳಿತ..ಸ್ವಲ್ಪ ದೂರ ಹೋಗುವಷ್ಟರಲ್ಲಿ ನನ್ನ ಕೆಂಗಣ್ಣ ದೃಷ್ಟಿ ವಿದ್ಯಾಧರನ ಮೇಲೆ ಬಿತ್ತು.ಅಷ್ಟರಲ್ಲೇ ಎದುರಿನಿಂದ ಯಮದೂತನಂತೆ ನುಗ್ಗಿಬಂದ ಲಾರಿಯೊಂದು ಅಪ್ಪಳಿಸಿ ಅದೇ ವೇಗದಲ್ಲಿ ಸಾಗಿಹೊಯ್ತು. ಎಲ್ಲವೂ ಕ್ಷಣದಲ್ಲೇ ಮುಗಿದುಹೋಗಿತ್ತು.ವಿದ್ಯಾಧರ ತಲೆಗೆ ಏಟು ಬಿದ್ದು ಅಲ್ಲೇ ಮೃತನಾದ ವಿಶ್ವಾಸ್ ನ ಕೈಕಾಲುಗಳಿಗೆ ಗಾಯವಾಗಿತ್ತು..ನನ್ನ ಮೇಲೆ ಆ ಎರಡು ಮಕ್ಕಳು ಬಿದ್ದಿದ್ದರು.ನನ್ನ ಮೇಲೆ ಬಿದ್ದಿದ್ದರಿಂದ ಅವರಿಗೇನೂ ಗಾಯಗಲಾಗಲಿಲ್ಲ.ನಾನೂ ತುಂಬಾ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದೆ .ಮಕ್ಕಳು ನಿಧಾನವಾಗಿ ಎದ್ದು ತಮ್ಮ ಮುಗ್ಧ ಕೈಗಳಿಂದ ನನ್ನನ್ನು ಸವರುತ್ತ "ಅಬ್ಬಾ ನಿಮ್ಮಿಂದ ನಾವು ಬದುಕಿದೆವು" ಎಂದೆನ್ನುತ್ತ ಅತ್ತವು.ವಿಶ್ವಾಸ್ನೂ ನನಗೆ ಕೈ ಮುಗಿದ ಒಟ್ಟಾರೆ ನನ್ನ ಮೌನವೇ ಎಲ್ಲದಕ್ಕೂ ಕಾರಣವಾಗಿತ್ತು.ಹಲವು ದಿನಗಳ ಚಿಕಿತ್ಸೆಯ ಬಳಿಕ ವಿಶ್ವಾಸ್ ಸಹಜ ಸ್ಥಿತಿಗೆ ಬಂದ. ಅವನು ಆ ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಆದರೆ ನನ್ನ ಕೈಕಾಳುಗಲೆರಡೂ ಮುರಿದಿದ್ದವು ನನ್ನನ್ನು ಇನ್ನು ತನ್ನ ಹೊಸ ಕಾರಿನಲ್ಲಿ ಕೂರಿಸಿಕೊಳ್ಳಲು ಅವನಿಗೆ ಇಷ್ಟವಾಗಲಿಲ್ಲ.ಹೊಸ ಕಾರಿನಲ್ಲಿ ಹೊಸದೊಂದು ಮೂರ್ತಿಯನ್ನು ತಂದು ಕೂರಿಸಿದ ! ಆದರೆ ಮಕ್ಕಳು ತಮ್ಮೊಂದಿಗೆ ನನ್ನನ್ನು ಕರೆದೊಯ್ದರು ನನ್ನ ಕೈಕಾಲುಗಳನ್ನು ಅಂಟಿಸಿ ಜೋಡಿಸಿದರು.ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕುಳಿತಿದ್ದ ನನ್ನಂತಹ ಪುಟ್ಟ ವಿನಾಯಕನಿಗೆ ಅನಾಥರ ರಕ್ಷಿಸುವುದೂ ತಿಳಿದಿದೆ ದುಷ್ಟರ ಶಿಕ್ಷಿಸುವುದೂ ತಿಳಿದಿದೆ.

No comments: