Tuesday, December 14, 2010

ಅವತಾರ !

ಕಪ್ಪು ತಂಪುನೆಲದ ಮೇಲೆ
ನೀಲಿ ರಕ್ತ ಸುರಿದಿದೆ

ಕೋಳಿಯೊಂದು ಮೊಟ್ಟೆಯಿಟ್ಟು
ಕಾವ ಕೊಡದೆ ಹೋಗಿದೆ

ಮುಗ್ದ ಜನರ ಪಿತ್ತವೆಲ್ಲ
ಒಡನೆ ನೆತ್ತಿಗೇರಿದೆ

ಪ್ರಜಾತಂತ್ರ ಮಂತ್ರವೆಲ್ಲ
ಬರಿಯ ಬೊಗಳೆಯಾಗಿದೆ

ಕಳ್ಳ ಕಾಕರೆಲ್ಲ ಎದ್ದು
ದೋಚಿ ಬಾಚಿದ್ದಾಗಿದೆ

ಹಗಲು ಇರುಳು ಎರಡೂ ಕೂಡ
ಹದಗೆಟ್ಟಿ ಹೋಗಿದೆ

ಹಾಗೇ ಇರುವ ಹಗರಣಗಳು
ಹಾಯಾಗಿ ಮಲಗಿವೆ

ಕೇಳೋರಿಲ್ಲ ಹೇಳೋರಿಲ್ಲ
ಪ್ರಶ್ನೆಗಳು ಹಲವಾರಿವೆ


ಮ0ದಿ ದುಡಿದ ಚಿಂದಿ ಹಣಕೆ
ನಾಯಿಗಳು ಬಾಯೂರಿವೆ

ಬೊಕ್ಕ ತಲೆಯ ಚೊಕ್ಕರೆಲ್ಲ
ಟೋಪಿ ಹಾಕಿ ನಲಿದಿವೆ

ಮಹರ್ಷಿಗಳೂ ಮನಸಿನಲ್ಲಿ
ಮಾಸಿದ ಮಾತನಾಡಿವೆ

ಗರಿಕೆ ಕುಡಿಯ ಬೇರು ಕೂಡ
ಸಹನೆಯಿರದೆ ನಲುಗಿದೆ

ಭಾಷೆ ಬರುವ ಧೀರರಿಗೆಲ್ಲ
ತೃಷೆ ತೀರದಾಗಿದೆ

ಬಿಳಿಯ ಬೆಳಕಿನಲ್ಲೂ ಕೂಡ
ದೋಷವೊಂದು ಕಂಡಿದೆ

ತಿಳಿಯಾದ ನೀರಲ್ಲೂ
ಸತ್ತ ಮೀನ ಶವವಿದೆ

ಗಂಧವಿರುವ ಗಾಳಿ ಕೂಡ
ಹೊಗೆಯಾಗಿ ಹೋಗಿದೆ

ನ್ಯಾಯ ಸಿಗದ ಚರಿತೆಯೊಂದು
ರಕ್ತ ಚರಿತೆಯಾಗಿದೆ

ದೇಶ ರಮ್ಯವಾದರೂ
ದೇಶೀಯತೆ ನಗಣ್ಯವಾಗಿದೆ !

ಇರುವವರೆಲ್ಲ ದುಷ್ಟರಾದರೂ
ಕಾಲವe ಕೆಟ್ಟದ್ದೆಂದು ದೂರಲಾಗಿದೆ

ಯುಗಪುರುಷನು ಅವತಾರವ
ಮತ್ತೆ ತಳೆಯಬೇಕಿದೆ....

No comments: